ಮನುಷ್ಯನ ನಡವಳಿಕೆ ದರ್ಪಣ ಇದ್ದಂತೆ ಅವನು ಏನು ಕೊಡುತ್ತಾನೊ ಕನ್ನಡಿ ಅದೇ ತಾನೇ ಕೊಡುವುದು. ಕೆಟ್ಟ ಮುಖ ತೋರಿಸಿದರೆ ಕೆಟ್ಟಮುಖ ಕನ್ನಡಿಯಲ್ಲಿ ಕಾಣುತ್ತೆ. ಒಳ್ಳೆ ಮುಖ, ಸುಂದರವಾದ ಮುಖ ತೋರಿಸಿದರೆ ಅದೂ ಸುಂದರವಾಗೇ ತೋರಿಸುತ್ತೆ. ನಾವು ಎಲ್ಲರಲ್ಲೂ ಒಳ್ಳೆಯದನ್ನೆ ನೋಡಿದರೆ, ನಮ್ಮಲ್ಲಿಯೂ ಅವರಿಗೆ ಒಳ್ಳೆಯತನವೇ ಕಾಣುತ್ತೆ. ಇದು ಬರೀ ಮಾತಲ್ಲ, ನನ್ನ ಅನುಭವ, ನಾನೀವತ್ತು ಒಳ್ಳೆ ತಾಯಿ, ಒಳ್ಳೆ ಸೊಸೆ, ಒಳ್ಳೆ ಮಗಳು, ಒಳ್ಳೆ ಅತ್ತೆ ಎಲ್ಲಾ ಆಗಿದ್ದೀನಿ. ಅಂದರೆ ನಾನು ಮೊದಲು ಒಳ್ಳೆಯವಳಾಗಿ ಒಳ್ಳೆಯತನವನ್ನು ತರಿಸಿ ನಂತರ ಒಳ್ಳೆ ಮಗ, ಮಗಳು, ಸೊಸೆಯನ್ನು ಪಡ್ಕೊಂಡಿದೀನಿ ಇದು ಮಮತ ವಸುವಿಗೆ ಸದಾ ಹೇಳುವ ಮಾತು.
ಆದ್ರೆ ಅದು ಸಾಧ್ಯವೇ ಇಲ್ಲಾ ಅನ್ನುವುದು ವಸುಮತಿಯ ನಿಲುವು. ತಾನು ಒಳ್ಳೆ ತಾಯಿ ಆಗಲಿಲ್ಲ. ಒಳ್ಳೆ ಹೆಂಡತಿ ಆಗಲಿಲ್ಲ, ಒಳ್ಳೆ ಸೊಸೆ ಆಗಲಿಲ್ಲ, ಒಳ್ಳೆ ಅತ್ತೇನೂ ಆಗಿಲ್ಲ ಅಂದ್ರೆ ನಾನೇ ಸರಿ ಇಲ್ಲವೇ, ನನ್ನದೇ ಎಲ್ಲಾ ತಪ್ಪೆ, ತನ್ನನ್ನು ಪ್ರಶ್ನಿಸಿಕೊಳ್ಳುವ ವಸುಮತಿ ಮನೆಯಲ್ಲಿ ನಡೆಯುತ್ತಿರುವ ಸೊಸೆಯ ವರ್ತನೆಯಿಂದಾಗಿ ರೋಸಿ ಹೋಗಿದ್ದಾಳೆ.
ತಾನು ಒರಟಾಗಿ ಮಾತಾಡ್ತೀನಿ ನಿಜ. ಆದರೆ ತಾನು ಹೇಳುವುದರಲ್ಲಿ ತಪ್ಪೇನಿದೆ. ಗಂಡ ದುಡಿದು ತಂದಿದ್ದನ್ನೆಲ್ಲ ತೌರಿನವರಿಗೆ ಸುರಿಯುತ್ತಾಳಲ್ಲ ಅದನ್ನು ನೋಡಿಯೂ ಹೇಗೆ ಸಹಿಸುವುದು, ಮಗನಿಗೆ ಹೇಳಿದರೆ ಏನಾದ್ರೂ ಮಾಡಿಕೊಳ್ಳಲಿ ಬಿಡಮ್ಮ ಎಂದು ಬಿಡುತ್ತಾನೆ. ನಾಳೆ ಇವನು ಕಷ್ಟ ಪಡುವಂತಾದರೆ ಅದನ್ನು ನೋಡುವುದು ನಾನೇ ತಾನೇ, ಸಾಮಾನು ವ್ಯರ್ಥ ಮಾಡಬೇಡ, ಮಾಡಿ ಮಾಡಿ ತೌರಿನವರಿಗೆ ಸಾಗಿಸಬೇಡ, ನಯನಾಜೂಕು ಕಲಿತುಕೋ ಅಂತ, ಹೇಳಿದ್ರೆ ಸಾಕು ಮಳ್ಳಿ ಹಾಗೆ ಕಣ್ಣೀರು ಹಾಕಿ ಗಂಡನ ಮುಂದೆ ನಾಟಕ ಆಡ್ತಾಳೆ. ಅವನೋ ಅವಳ ಕಣ್ಣೀರಿಗೆ ಕರಗಿ ಹೋಗಿ ನನ್ನ ಬೈಯ್ಯುತ್ತಾನೆ. ತಾಯಿ ಅನ್ನೋ ಪ್ರೀತಿ ಇರಲಿ ಗೌರವ ಕೂಡ ಇಲ್ಲ ಹೆತ್ತ ಮಗನಿಗೆ. ಆ ಮಗಳೆ, ಇರೋ ಒಬ್ಳೆ ಮಗಳಾದರೂ ತಾಯಿಗಿಂತ, ಗಂಡ, ಅತ್ತೆ, ನಾದಿನಿರೇ ಹೆಚ್ಚು ಅವಳಿಗೆ, ಸದಾ ತನ್ನ ಸಂಸಾರದಲ್ಲಿ ಮುಳುಗಿ ಹೋಗಿರುವ ಮಗಳಿಗೆ ತನ್ನ ಮಾತುಗಳನ್ನು ಕೇಳುವ ಸಹನೆ ಇಲ್ಲಾ, ನನ್ನ ಕಷ್ಟ ಸುಖಗಳಿಗೆ ಸ್ಪಂದಿಸೊ ಮನಸ್ಸು ಮೊದಲೇ ಇಲ್ಲಾ. ನೀನೇ ಹೊಂದಿಕೊಂಡು ಹೋಗಮ್ಮ, ನಿನ್ನ ಸೊಸೆ ಒಳ್ಳೆ ಹುಡುಗಿನೇ ಕಣಮ್ಮ ಎಂದು ಸಮಾಪ್ತಿ ಹಾಡಿ ಬಿಡುತ್ತಾಳೆ. ಒಳ್ಳೆ ಗಂಡನೂ ಸಿಗಲಿಲ್ಲ. ಒಳ್ಳೆ ಅತ್ತೆ ಮೊದಲೇ ಇಲ್ಲಾ, ಆಗೆಲ್ಲಾ ಬರಿ ಕಷ್ಟವನ್ನೇ ಹಾಸಿ ಹೊದ್ದದ್ದಾಗಿತ್ತು. ಈಗಲಾದರೂ ಸುಖವಾಗಿರೋಣ ಅಂದರೆ ಮಗ ಸೊಸೆನೇ ಸರಿ ಇಲ್ಲಾ, ಇರುವ ಒಬ್ಬಳೇ ಗೆಳತಿಯ ಜೊತೆ ಸದಾ ಹೇಳಿಕೊಳ್ಳುವ ಹಾಡು ಇದು.
ನೆಮ್ಮದಿಯೇ ಇಲ್ಲದ ಗೆಳತಿಯನ್ನು ಬಲವಂತವಾಗಿ ಹೊರಡಿಸಿದಳು. ಮೊಮ್ಮಗನ ಮುಂಜಿಗೆ. ಮಮತನಿಗೆ ಒಬ್ಬ ಮಗ, ಒಬ್ಬಳೇ ಮಗಳು. ಮಗ ಇರೋದು
ಬೆಂಗಳೂರಿನಲ್ಲಿ ಮಗಳು ಇರೋದು ಮೈಸೂರಿನಲ್ಲಿ ಮಮತ ಅವಳ ಗಂಡ ಇದೇ ಊರಿನಲ್ಲಿದ್ದು, ಮಗ-ಮಗಳ ಮನೆಗೆ ಆಗಾಗ್ಗೆ ಹೋಗಿ ಬಂದು ಮಾಡುತ್ತಿರುತ್ತಾರೆ. ಮಮತಾ ಯಾವತ್ತೂ ಹೋದ್ರೆ ಸಾಕು ಅಂತ ಅನ್ನಿಸಿಕೊಂಡವಳಲ್ಲ. ಸೊಸೆಗೆ ಅತ್ತೆಯನ್ನು ಉಳಿಸಿಕೊಳ್ಳುವ ಆಸೆ. ಮಮತಾಳಿಗೂ ಸೊಸೆ ಅಂದರೆ ಅಚ್ಚುಮೆಚ್ಚು. ಆದರೆ ಗಂಡನಿಗಾಗಿ ಇಲ್ಲಿಗೆ ಓಡಿ ಬರಲೇ ಬೇಕು. ಗಂಡ ಊರು ಮನೆ ಬಿಟ್ಟು ಮಗನ ಮನೆಯಲ್ಲಿ ಬಂದಿರಲು ಒಪ್ಪಲಾರ, ಹಾಗಾಗಿ ಅಲ್ಲಾರು ತಿಂಗಳು ಇಲ್ಲಾರು ತಿಂಗಳು ಎಂಬಂತಿರುತ್ತಾಳೆ.
ಇರುವ ಒಬ್ಬನೇ ಮೊಮ್ಮಗನ ಮುಂಜಿ, ಅದ್ದೂರಿಯಾಗಿ ಮಾಡುತ್ತಿದ್ದಾರೆ. ಯಾವಾಗ ಕರೆದರೂ ನೆವಹಾಕಿ ತಪ್ಪಿಸಿಕೊಳ್ಳುವ ಗೆಳತಿಯನ್ನು ಈ ಬಾರಿ ಯಾವ
ಸಬೂಬಿಗೂ ಒಪ್ಪದೇ ಮಗನ ಮನೆಗೆ ಹೊರಡಿಸಿಕೊಂಡು ಹೊರಟಳು. ಮನೆ ತುಂಬ ನೆಂಟರಿಷ್ಟರು ತುಂಬಿ ಹೋಗಿದ್ದರು. ಅವರ ನಡುವೆ ವಸುಮತಿಗೆ ಮುಜುಗರವೋ ಮುಜುಗರ. ಸಂಕೋಚದಿಂದ ಕೋಣೆ ಬಿಟ್ಟು ಹೊರಬರುತ್ತಲೇ ಇರಲಿಲ್ಲ.
ಮಮತಳೇ ವಸುವನ್ನು ಹುಡುಕಿಕೊಂಡು ಬಂದು ಉಪಚಾರ ಮಾಡುತ್ತಿದ್ದಳು. ಸೊಸೆ ಅತ್ತೆಯ ಮುಂದೆ ಹಿಂದೆ ಸುತ್ತುತ್ತಾ ಸದಾ ಅವಳ ಸಲಹೆ ಪಡೆಯುತ್ತ ಅಮ್ಮ
ಅಮ್ಮ ಎನ್ನುತಿದ್ದರೆ ವಸುಮತಿ ಕೊಂಚ ಅಸೂಯೆಯಿಂದಲೇ ನೋಡುತ್ತ “ಎಂಥ ಒಳ್ಳೆ ಸೊಸೆನಾ ಪಡ್ಕೊಂಡಿದ್ದೀಯಾ ಮಮತ, ಪುಣ್ಯವಂತೆ ನೀನು” ಹೃದಯದಿಂದ ಹೇಳಿದಳು.
“ಅವರಿಗಿಂತ ನಾನೇ ಪುಣ್ಯವಂತೆ ಆಂಟಿ, ಅಮ್ಮನಂತಿರೋ ಅತ್ತೆ ಸಿಕ್ಕಿರೋದು ನನ್ನ ಪುಣ್ಯ ಅಲ್ವಾ” ಮಮತಳ ಸೊಸೆ ಅತ್ತೆಯತ್ತ ಪ್ರೀತಿಯಿಂದ ನೋಡುತ್ತಾ ಹೇಳಿದಳು.
“ನನ್ನ ಸೊಸೆ ಬಂಗಾರ ಕಣೆ” ಹೆಮ್ಮೆಯಿಂದ ಹೇಳಿದಳು ಮಮತ.
“ಹೋಗಿ ಅತ್ತೆ ನಿಮ್ಗೆ ನನ್ನ ಹೊಗಳೋದೇ ಕೆಲಸ” ವಸು ಮುನಿಸಿನಿಂದ ನಗುತ್ತಾ ಹೊರ ಹೋದಳು.
“ನೋಡಿದ್ಯಾ ವಸು, ಒಂದೇ ಒಂದು ಒಳ್ಳೆ ಮಾತು ನನ್ನ ಸೊಸೆನಾ ಎಷ್ಟೊಂದು ಒಳ್ಳೆಯವಳನ್ನಾಗಿ ಮಾಡಿದೆ ಅಂತ ನಾವು ಬಂಗಾರವಾಗಿ ನಡ್ಕೊಂಡರೇ, ಎಲ್ರೂ ನಮ್ಮ
ಜೊತೆ ಬಂಗಾರವಾಗಿಯೇ ಇರುತ್ತಾರೆ. ಸಂಸಾರ ಅಂದ ಮೇಲೆ ತಪ್ಪು ಒಪ್ಪು ನಡೆದೇ ನಡೆಯುತ್ತೆ, ನಾವು ಅದನ್ನೇ ದೊಡ್ಡದು ಮಾಡಬಾರದು ಕಣೆ”
ಪರೋಕ್ಷವಾಗಿ ತನ್ನನ್ನು ದೂಷಿಸಿದಂತಾಗಿ “ಅಲ್ವೆ ಅವ್ರು ಏನು ಮಾಡಿದ್ರೂ ನಾವು ಹೇಗೇ ಒಳ್ಳೆಯವರಾಗಿ ಇರೋಕೆ ಸಾಧ್ಯ” ಎಂದಳು ವಸುಮತಿ.
“ಯಾರೂ ಕೆಟ್ಟವರಲ್ಲ ವಸು, ನಮ್ಮ ನಡೆ ನುಡಿ ಮಾತುಗಳಿಂದಲೇ ಎಲ್ಲರನ್ನು ಒಳ್ಳೆಯವರನ್ನಾಗಿ ನೋಡಬಹುದು”
“ಸೊಸೆ ಏನು ಮಾಡಿದ್ರೂ ಹೇಗೆ ಸಹಿಸ್ಕೊಳ್ಳೋದು”
“ಸಹಿಸಿಕೊಳ್ಳಬೇಕು ವಸು, ಸಹಿಸದೆ ಇದ್ರೆ ವಿಧಿ ಇಲ್ಲಾ ಈಗೇನೋ ಕೈಕಾಲು ಗಟ್ಟಿಯಾಗಿರುತ್ತೆ, ನಮ್ಮದೇ ನಡೀಬೇಕು ಅಂತ ಹಠ ಮಾಡ್ತೀವಿ. ಆದ್ರೆ ನಾಳೆ ನಾವು ಸೋತಾಗ ನಮ್ಮ ತಪ್ಪನ್ನೆಲ್ಲ ಎತ್ತಿ ಆಡಿ ನಮ್ಮ ಮೂತಿ ತಿವಿಯೋಲ್ವೆ, ನೋಡು ವಸು ಸೊಸೆಯಾಗಿ ಬರೋ ಹೆಣ್ಣು ನೂರಾರು ಕನಸು ಹೊತ್ತು ಬಂದಿರುತ್ತಾಳೆ. ಹೆತ್ತವರನ್ನೆಲ್ಲ ಬಿಟ್ಟು ನಮ್ಮನ್ನು ನಂಬಿ ಬಂದಿರೊ ಸೊಸೆನಾ ಭಾಗ್ಯದಲಕ್ಷ್ಮಿ ಬಾರಮ್ಮ ಅಂತ ಒಳಗೆ ಕರ್ಕೋತೀವಿ. ಬಂದ ಮೇಲೆ ಅವಳ ಮೇಲೆ ಸವಾರಿ ಮಾಡಿ ಅವಳನ್ನು ನೋಯಿಸೋದು ಎಷ್ಟು ಸರಿ. ಮನೆ ಬೆಳಗೋಕೆ ಬಂದಿರುವ ಹೆಣ್ಣಿಗೆ ಪೂರ್ತಿ ಸ್ವಾತಂತ್ರ್ಯ ಕೊಟ್ಟು ಬಿಡಬೇಕು. ಸಣ್ಣ ಪುಟ್ಟದ್ದಕ್ಕೆಲ್ಲ ಆಕ್ಷೇಪಣೆ ಮಾಡದೇ, ಅವಳ ಒಳ್ಳೆತನ ಹೊಗಳಬೇಕು. ಸಣ್ಣ ಪುಟ್ಟ ವಿಷಯಗಳೇ ಅತ್ತೆ-ಸೊಸೆ ಮಧ್ಯೆ ಕಂದಕವಾಗಿ ನಿಂತು ಬಿಡುತ್ತೆ. ನಾಲ್ಕು ಜನ ಸೇರಿದಾಗ ನನ್ನ ಸೊಸೆ ಬಂಗಾರ ಅಂದ್ರೆ, ಅವಳು ಹಿತ್ತಾಳೆ, ಆಗಿದ್ರೂ ಬಂಗಾರ ಆಗೋಕೆ ಪ್ರಯತ್ನ ಪಡ್ತಾಳೆ ಅಲ್ವಾ ವಸು”
“ಇದೆಲ್ಲ ಹೇಳೋಕೆ ಚೆನ್ನ ಮಮತಾ, ಆದ್ರೆ ಸೊಸೆ ಯಾವತ್ತೂ ಸೊಸೆನೇ ಕಣೆ ಅವಳೆಂದೂ ಮಗಳಾಗೋಕೆ ಸಾಧ್ಯವೇ ಇಲ್ಲಾ. ನಿನ್ನ ಸೊಸೆ ಏನೋ ಒಳ್ಳೆಯವಳು,”
ಮೂಗು ಮುರಿದಳು ವಸುಮತಿ.
“ಅದೇ ತಪ್ಪು ಕಣೆ ನಾವು ಮಾಡೋದು, ಸೊಸೆ ನಮಗೆ ಮಗಳಾದ್ರೆ ಅತ್ತೇನಾ ಯಾಕೆ ಅವಳು ತಾಯಿ ಅಂದ್ಕೊಳಲ್ಲ. ಎಲ್ಲಾ ಹೆಣ್ಣು ಮಕ್ಕಳಿಗೂ ತೌರಿನವರ ಮೇಲೆ
ವ್ಯಾಮೋಹ ಜಾಸ್ತಿನೇ ಇರುತ್ತೆ. ನಾವೇ ಅವಳ ತೌರಿನವರನ್ನು ಅವಳಿಗಿಂತ ಚೆನ್ನಾಗಿ ನೋಡಿಕೊಂಡರೆ ಮೊದಲ ಹಂತದಲ್ಲಿಯೇ ನಾವು ಗೆದ್ದು ಬಿಡ್ತೀವಿ. ಆಗ ಯಾವ ಸಮಸ್ಯೆನೂ ಬರಲ್ಲ ನೋಡು ಅತ್ತೆ ಸೊಸೆ ಸಂಬಂಧ ಹಾಲು ಜೇನಿನಂತಿರಬೇಕಾದರೆ ಸೊಸೆ ಮಾಡೋ ತಪ್ಪನ್ನು ದೊಡ್ಡದು ಮಾಡಲೇಬಾರದು. ಅವಳ ಮನಸ್ಸಿಗೆ ಹಿತವಾಗೋ ಹಾಗೆ ನಡ್ಕೋಬೇಕು. ಅದರಲ್ಲೂ ಸೊಸೆ ಮೇಲೆ ಮಗನಿಗೆ ಎಂದೂ ಚಾಡಿ ಹೇಳಲೇ ಬಾರದು.”
ಕಾಫಿ ಹಿಡಿದು ಒಳಬಂದ ಅಂಜಲಿ “ಕಾಫಿ ತಗೊಳಿ, ಅಮ್ಮ ಆಂಟಿ ಜೊತೆ ಹಾಯಾಗಿ ಮಾತಾಡ್ತಾ ಇರಿ. ನಾನೆಲ್ಲ ನೋಡ್ಕೋತೀನಿ. ವಸು ಆಂಟಿ ಅಮ್ಮನ್ನ ಆಚೆಗೆ ಬಿಡಬೇಡಿ ಕೈಲಾಗದೆ ಇದ್ರೂ ಎಲ್ಲಾ ಮಾಡ್ತೀನಿ ಅಂತ ಬಂದು ಬಿಡ್ತಾರೆ. ನಾನಿರೋದು ಯಾಕೆ ಹೇಳಿ, ಅವರು ಹೀಗೆ ಮಾಡು ಅಂದ್ರೆ ಸಾಕು ನಾನು ಎಲ್ಲಾ ಮಾಡ್ತೀನಿ. ಏನಾದ್ರೂ ಬೇಕಾದ್ರೆ ಇಲ್ಲಿಂದ್ಲೆ ಒಂದು ಕೂಗು ಹಾಕಿ ಬಿಡಿ ಬಂದು ಬಿಡ್ತೀನಿ” ಎಂದು ಸೊಸೆಯನ್ನೆ ಮಮತೆ, ಮೆಚ್ಚುಗೆಯಿಂದ ನೋಡುತ್ತಾ.
“ಈಗ ಕೂರೋ ಸಮಯನಾ ಅಂಜೂ, ನಡಿ ನಾನೂ ಬರ್ತೀನಿ, ವಸು ಅಲ್ಲಿಗೇ ಬರುತ್ತಾಳೆ. ಎಷ್ಟು ಕೆಲಸ ಇದೆ, ವಸೂ ಏನೂ ಬೇರೆಯವಳೇ, ಅವಳೂ ನಮ್ಮ ಜೊತೆ
ಸೇರಿ ಕೊಳ್ತಾಳೆ, ಬಾ ವಸೂ ನೀನು ನಂಜೊತೆ ಇದ್ರೆ ನಂಗೂ ಸಮಾಧಾನ” ವಸುವನ್ನು ಹೊರಗೆ ಕರೆದೊಯ್ದಳು.
ಮಮತಳ ನಡೆ ನುಡಿಗಳನ್ನೆ ವಿಶೇಷವಾಗಿ ವಸು ಗಮನಿಸ ಹತ್ತಿದಳು. ಮಮತ ಸೊಸೆಗೆ ಹೆಚ್ಚು ಎನಿಸುವಷ್ಟು ಒತ್ತು ನೀಡುತ್ತಿದ್ದಳು. ಯಾವ ಕಾರಣಕ್ಕೂ ಸೊಸೆಗೆ ಬೇಸರ ತರಿಸುತ್ತಿರಲಿಲ್ಲ. ಅವಳು ಏನು ಹೇಳಿದರೂ ಸರಿ ಎಂದು ಬಿಡುತ್ತಿದ್ದಳು. ಇದು ಅತಿ ಎನಿಸಿದರೂ ಅದರ ಪ್ರತಿಫಲ ಎಂಬಂತೆ ಅಂಜಲಿಯೂ ಹೆಜ್ಜೆ ಹೆಜ್ಜೆಗೂ ಅತ್ತೆಯ ಸಲಹೆ ಕೇಳುತ್ತಾ ಅತ್ತೆ ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದಳು. ಅತ್ತೆಯನ್ನು ಕೇಳದೇ ಯಾವ ಸಣ್ಣ ತೀರ್ಮಾನಕ್ಕೂ ಬರುತ್ತಿರಲಿಲ್ಲ. ಒಟ್ಟಿನಲ್ಲಿ ಆದರ್ಶ ಅತ್ತೆ ಎಂದುಕೊಂಡ ವಸು ತನ್ನ ಬದುಕಿನಲ್ಲಿ ಇದು ಸಾಧ್ಯವೇ ಎಂದು ಚಿಂತಿಸಿದಳು.
ಅಶ್ವಿತನ ಮುಂಜಿ ಭರ್ಜರಿಯಾಗಿ ನಡೆಯಿತು. ಯಾವ ಕುಂದೂ ಉಂಟಾಗದೆ ಬಂಧು ಬಾಂಧವರೆಲ್ಲ ಉಂಡು ಸಂತೃಪ್ತರಾಗಿ ಉಡುಗೊರೆ ಪಡೆದು ಹೊರಟು ನಿಂತರು. ಸಮಾರಂಭ ಮುಗಿಯುವಷ್ಟರಲ್ಲಿ ವಸು ಮಮತಳಾ ಮನೆಯವಳೇ ಆಗಿಬಿಟ್ಟಿದ್ದಳು. ಪ್ರತಿಯೊಬ್ಬರೂ ವಸುವನ್ನು ಉಪಚರಿಸುವವರೇ, ಕ್ಷಣವೂ ಬೇಸರವಾಗದಂತೆ ಒಬ್ಬರಲ್ಲ ಒಬ್ಬರು ಮಾತನಾಡಿಸುತ್ತ ಆತ್ಮೀಯತೆ ತೋರಿಸುತ್ತಾ ಇರುವುದನ್ನು ಕಂಡು ವಸುವಿಗೆ ಹೃದಯ ತುಂಬಿ ಬಂದಿತ್ತು.
ಮಗಳು ಹೊರಟು ನಿಂತಾಗ ಮಮತ ಅವಳಿಗೆ ಕೊಡುವುದನ್ನೆಲ್ಲ ಸೊಸೆಯ ಕೈಲೇ ಕೊಡಿಸಿದಳು. ನಾದಿನಿ ಹೊರಟು ನಿಂತಾಗ ಕಣ್ತುಂಬಿಕೊಳ್ಳುತ್ತಲೇ ಅಂಜಲಿ ಬೀಳ್ಕೊಟ್ಟಾಗ ವಸು ಬೆರಗಾದಳು. ಸೊಸೆಯ ಹೆತ್ತವರು ಹೊರಡುವಾಗ ತಾನೇ ಹೆಚ್ಚಿನ ಮಾತುವರ್ಜಿ ವಹಿಸಿ ಯಾವುದನ್ನೂ ಮರೆಯದೆ ಎಲ್ಲವನ್ನೂ ಪ್ಯಾಕ್ ಮಾಡಿ ಅತ್ಯಂತ ಆತ್ಮೀಯತೆಯಿಂದ ಕಳುಹಿಸಿಕೊಟ್ಟಳು.
ಮಗ ಅಮ್ಮನ ಕೈಗೆ ದುಡ್ಡು ನೀಡಿದಾಗ, ಸೊಸೆಯನ್ನು ಕರೆದು ಆ ಹಣವನ್ನು ಅವಳಿಗೇ ನೀಡಿ ತನಗೆ ಬೇಕಾದಾಗ ಕೊಡುವೆಯಂತೆ, ಈಗ ತನ್ನತ್ರ ಹಣ ಇದೆ ಎಂದಾಗ ಹೀಗೂ ಉಂಟೆ ಎನಿಸಿ ಆಕ್ಷೇಪಿಸಿದಳು.
“ಗಂಡ ತನಗೆ ಕಾಣದಂತೆ ಅತ್ತೆಗೆ ದುಡ್ಡು ಕೊಡುತ್ತಾನೆ ಅಂತ ಸೊಸೆ ತಿಳಿದುಕೊಳ್ಳಬಾರದಲ್ಲ, ಬೇಕಾದ್ರೆ ಅವಳ ಹತ್ರನೇ ಇಸ್ಕೊಂಡ್ರಾಯ್ತು” ಮಾತಿನಲ್ಲಿ
ತೇಲಿಸಿದಳು.
ಹದಿನೈದು ದಿನಗಳು ನಿಮಿಷಗಳಂತೆ ಕಳೆದು ಹೋದವು. ಈಗ ಮನೆಯತ್ತ ಮನಸ್ಸು ಎಳೆಯತೊಡಗಿತು. ಎಷ್ಟೇ ಹೇಳಿದ್ರೂ ನಿಲ್ಲದೇ ಹೊರಟು ನಿಂತಳು.
“ಬಸ್ಸಿನಲ್ಲಿ ಕುಳಿತಾಗಲೂ ಮನಸ್ಸು ಮಮತಳ ಮಾತುಗಳನ್ನೂ ಅವಳ ನಡೆನುಡಿಗಳನ್ನೂ ಮೆಲುಕು ಹಾಕುತ್ತಿತ್ತು. ಪ್ರತ್ಯಕ್ಷವಾಗಿ ಕಂಡದ್ದನ್ನೆಲ್ಲವನ್ನೂ ಪರಾಮರ್ಶೆಗೊಳಿಸುತ್ತಿದ್ದಳು. ಮಮತ ಹೇಳುವುದು ನಿಜವೇ. ತನ್ನಂತೆ ಪರರು ಎಂಬುದನ್ನು ತಾನು ನಂಬಬೇಕೇ? ಪರೀಕ್ಷಿಸಿಯೇ ಬಿಡೋಣ. ನಾನೇ ಮೊದಲು ಬಂಗಾರವಾಗುತ್ತೇನೆ. ನೋಡಿಯೇ ಬಿಡುತ್ತೇನೆ ಎಲ್ಲರೂ ಬಂಗಾರವಾಗುತ್ತಾರೆಯೇ ಎಂದು ನಿರ್ಧರಿಸಿಯೇ ಮನೆಗೆ ಹಿಂತಿರುಗಿದಳು.
ಮನೆ ಹೊಸದಾಗಿ ಕಾಣಿಸತೊಡಗಿತು. ಮನೆಯವರೆಲ್ಲ ಹೊಸಬರಾಗಿ ಕಾಣಿಸತೊಡಗಿದರು. ಸೊಸೆಯ ಬಗ್ಗೆ ಮೃದುವಾದಳು. ಅವಳ ನಡೆ ನುಡಿಗಳೆಲ್ಲಾ
ಸಹ್ಯವಾಗತೊಡಗಿದಾಗ ಆಕ್ಷೇಪಣೆಯನ್ನೆ ಮರೆತು ಬಿಟ್ಟಳು. ಸೊಸೆಯ ತೌರಿನವರು ಬಂದಾಗ ತಾನೇ ಖುದ್ದಾಗಿ ನಿಂತು ಉಪಚರಿಸಿದಳು. ಅಡಿಗಡಿಗೆ ಒಳ್ಳೆಯ ಮಾತುಗಳಾಡುತ್ತ ಸೊಸೆಯನ್ನು ಎಲ್ಲರ ಮುಂದೂ ಮೆಚ್ಚಿಕೊಳ್ಳ ತೊಡಗಿದಾಗ ಸೊಸೆಯೂ ವಸುವಿಗೆ ಹೆಚ್ಚಿನ ಗೌರವ ಕೊಡ ಹತ್ತಿದಳು. ಈ ಸಂಬಂಧಗಳು ದರ್ಪಣ ಎಂದು ಮಮತ ಹೇಳುತ್ತಿದ್ದುದು ನಿಜವೇ ಅನಿಸಿತು. ನಾವು ಒಳ್ಳೆಯದನ್ನು ಕೊಟ್ಟರೆ ನಮಗೇ ಒಳೆಯದೇ ದಕ್ಕುತದೆ.
ಅಮ್ಮಾ ಊರಿಗೆ ಹೋಗಿ ಬಂದ ಮೇಲೆ ಸಂಪೂರ್ಣ ಬದಲಾಗಿ ಬಿಟ್ಟಿರುವುದು ವಸುವಿನ ಮಗ ಸೊಸೆಗೆ ಅಚ್ಚರಿ ತಂದಿತ್ತು. ಅಂತೂ ಕೊನೆಗೆ ಅಮ್ಮನಿಗೆ ಒಳ್ಳೆ
ಬುದ್ಧಿಯನ್ನು ಆ ದೇವರು ಕೊಟ್ಟು ಬಿಟ್ಟನಲ್ಲ ಅಂತ ಸಂತೋಷ ಪಟ್ಟುಕೊಂಡರು.
ಮಮತಾ ಊರಿಗೆ ಬಂದಾಗ ವಸುವನ್ನು ಹುಡುಕಿಕೊಂಡು ಬಂದಳು.
“ಬಾ ಮಮತಾ, ಯಾವಾಗ ಬಂದೆ ಊರಿಗೆ”
“ಈಗ ತಾನೆ ಬಂದೆ, ಬಂದ ಕೂಡಲೇ ನಿನ್ನ ನೋಡೋಣ ಅಂತ ಬಂದುಬಿಟ್ಟೆ.”
“ಒಳ್ಳೆಯದಾಯ್ತು ಬಂದಿದ್ದು, ನೀನು ಯಾವಾಗ ಬರ್ತಿ ಅಂತ ಕಾಯ್ತಾ ಇದ್ದೆ ಮಮತಾ”
“ಅತ್ತೆ ನೀರು ಕಾದಿದೆ ಏಳ್ತಿರಾ, ಎಣ್ಣೆ ತಿಕ್ಕಿ ಬಿಡ್ತೀನಿ ಬಿಸಿ ಬಿಸಿ ನೀರು ಹಾಕಿದ್ರೆ ನೋವು ಕಡಿಮೆ ಆಗುತ್ತೆ” ಎನ್ನುತ್ತ ಒಳಬಂದವಳೇ ಅತ್ತೆಯ ಕಾಲಿಗೆ ನೋವಿನೆಣ್ಣೆ ತಿಕ್ಕುತ್ತಲೇ ಅತ್ತೆಯ ಗೆಳತಿಯನು ವಿಚಾರಿಸಿ ಕೊಂಡಳು.
“ನೋಡಿ ಆಂಟಿ ನಾನೆಲ್ಲ ನೊಡ್ಕೋತೀನಿ ಅಂತ ಹೇಳಿದ್ರೂ ಕೇಳದೆ ಬಚ್ಚಲು ತೊಳೆಯೋಕೆ ಹೋಗಿ ಜಾರಿ ಕಾಲು ಉಳುಕಿಸಿಕೊಂಡಿದ್ದಾರೆ. ಆಸ್ಪತ್ರೆಗೆ ಹೋಗೋಣ ಅಂದ್ರೂ ಕೇಳ್ತಾ ಇಲ್ಲಾ, ಅದಕ್ಕೆ ನೋವಿನೆಣ್ಣೆ ತರಿಸಿ ತಿಕ್ಕಿ ನೀರು ಹಾತ್ತೀನಿ, ಕಡಿಮೆ ಆಗದೆ ಇದ್ರೆ ನಾಳೆ ಆಸ್ಪತ್ರೆಗೆ ಹೋಗ್ಲೇಬೇಕು”
ವಸುವಿನ ಸೊಸೆಯ ಮಾತುಗಳನ್ನು ಕೃತಿಯನ್ನು ನೋಡುತ್ತ ನಿಬ್ಬೆರಗಾಗಿ ಹೋದ ಮಮತಳ ಬಾಯಿಂದ ಮಾತುಗಳೇ ಹೊರಡುತ್ತ ಇಲ್ಲಾ.
ಗೆಳತಿಯ ಅಚ್ಚರಿ ತುಂಬಿದ ಕಣ್ಣುಗಳು ಹೇಳಿದ ಪ್ರಶ್ನೆಗೆ ಉತ್ತರ ಎಂಬಂತೆ,
“ನನ್ನ ಸೊಸೆನೂ ಬಂಗಾರ ಅಲ್ವೇನೇ ಮಮತಾ,” ಎಂದಾಗ “ನಿನ್ನ ಮನಸ್ಸು ಎಷ್ಟು ಸುಂದರವಾಗಿದೆ ವಸು” ಅಂತರಾಳದಿಂದ ಹೂರಹೊಮ್ಮಿದ್ದನ್ನು ತಡೆಯದೆ ಹೇಳಿದಳು.
“ಆ ಸೌಂದರ್ಯವನ್ನು ದರ್ಪಣದಲ್ಲಿ ತೋರಿಸಿದ ಆ ದೇವತೆ ನೀನಲ್ಲವೇ”
ಆತ್ಮೀಯತೆಯಿಂದ ಗೆಳತಿಯ ಕೈಗಳನ್ನು ಹಿಡಿದುಕೊಂಡಳು.
*****
ಪುಸ್ತಕ: ದರ್ಪಣ